ನೀರೋ
	37-68. ರೋಮ್ ಚಕ್ರವರ್ತಿಯಾಗಿದ್ದವ (54-68). 37ರ ಡಿಸೆಂಬರ್ 15ರಂದು ಹುಟ್ಟಿದ. ಇವನ ಮೂಲನಾಮ ಲೂಸಿಯಸ್ ಡೊಮಿಟಿಯಸ್ ಅಹೀನೊಬಾರ್ಬಸ್ ಎಂದು. ಇವನ ತಂದೆ 40ರಲ್ಲಿ ತೀರಿಕೊಂಡ. ಇವನ ತಾಯಿ ಅಗ್ರಿಪ್ಪಿನ. ಈಕೆ ಅಗಸ್ಟಸನ ಮರಿಮಗಳು. ಚಕ್ರವರ್ತಿ 1ನೆಯ ಕ್ಲಾಡಿಯಸನ ಪತ್ನಿ ಸತ್ತಾಗ ಅವನನ್ನು ಮದುವೆಯಾದಳು. ಕ್ಲಾಡಿಯಸನಿಗೆ ಆಗ 3 ವರ್ಷ ವಯಸ್ಸಿನ ಬ್ರಿಟಾನಿಕಸ್ ಎಂಬ ಮಗನಿದ್ದ. ಆದರೆ ಆಗ್ರಿಪ್ಪಿನಳ ಒತ್ತಾಯಕ್ಕೆ ಮಣಿದು ಕ್ಲಾಡಿಯಸ್ 50ರಲ್ಲಿ ನೀರೋನನ್ನು ದತ್ತುವಾಗಿ ಸ್ವೀಕರಿಸಿದ. ಅಲ್ಲದೆ ಸ್ವಲ್ಪ ಕಾಲವಾದ ಮೇಲೆ ತನ್ನ ಮಗಳು ಆಕ್ಟೇವಿಯಳನ್ನು ಅವನಿಗೆ ಕೊಟ್ಟು ಮದುವೆ ಮಾಡಿದ. ನೀರೋನೇ ತನ್ನ ಅನಂತರ ಚಕ್ರವರ್ತಿಯಾಗುವಂತೆ ಅವನಿಗೆ ಹಲವಾರು ಸ್ಥಾನಮಾನಗಳನ್ನು ನೀಡಿದ. 54ರ ಅಕ್ಟೋಬರ್ 13ರಂದು ಕ್ಲಾಡಿಯಸ್ ತೀರಿಕೊಂಡ. ಅವನಿಗೆ ವಿಷಪ್ರಯೋಗವಾಗಿತ್ತೆಂದೂ ಅಗ್ರಿಪ್ಪಳೇ ಹಾಗೆ ಮಾಡಿದ್ದಳೆಂದೂ ಹೇಳಲಾಗಿತ್ತು. ಕ್ಲಾಡಿಯಸ್ ಸತ್ತೊಡನೆಯೇ ನೀರೋನನ್ನು ಚಕ್ರವರ್ತಿಯೆಂದು ಘೋಷಿಸಲಾಯಿತು. ಇನ್ನೂ 17 ವರ್ಷವೂ ತುಂಬದ ಆತನಲ್ಲಿ ಸಾಮ್ರಾಜ್ಯದ ಅಧಿಕಾರ ನಿಹಿತವಾಗಿತ್ತು.

	ಪಟ್ಟಕ್ಕೆ ಬಂದ ಸಮಯದಲ್ಲಿ ಸೆನೇಟಿನ ಮುಂದೆ ನೀರೋ ಮಾಡಿದ ಭಾಷಣದಲ್ಲಿ ಪ್ರಜೆಗಳಿಗೆ ಅನೇಕ ವಾಗ್ದಾನಗಳನ್ನು ನೀಡಿದ್ದ. ಹಿಂದಿನ ಚಕ್ರವರ್ತಿ ಕ್ಲಾಡಿಯಸ್ ನಡೆಸುತ್ತಿದ್ದ ರಹಸ್ಯ ವಿಚಾರಣೆಗಳನ್ನೂ ಭ್ರಷ್ಟಾಚಾರವನ್ನೂ ಕೊನೆಗೊಳಿಸುವುದಾಗಿಯೂ ಸೆನೇಟಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವುದಾಗಿಯೂ ಹೇಳಿದ್ದ. ಸ್ವಲ್ಪ ಕಾಲ ನೀರೋ ಹೀಗೆಯೇ ನಡೆದುಕೊಂಡ. ಸೆನೇಟರನ್ನು ಕೊಲ್ಲುವ ಪದ್ಧತಿಯ ಕೊನೆಯಾಗಿತ್ತು. ಉದಾರಿಯೂ ದಯಾಳುವೂ ಆಗಿ ತೋರಿದ ಅವನ ಆಳ್ವಿಕೆಯ ಮೊದಲಿನ 5 ವರ್ಷಗಳನ್ನು ಸ್ವರ್ಣಯುಗವೆನ್ನಲಾಗಿದೆ. ಸಮಕಾಲೀನರ ವರದಿಯ ಪ್ರಕಾರ ಅವನು ಆ ಕಾಲದಲ್ಲಿ ಚಂಚಲಿಸುವ ಸುಂದರ ಯುವಕನಾಗಿದ್ದ. ಕ್ರೂರಿಯಾಗಿದ್ದ ತಾಯಿಯ ಬಗ್ಗೆ ಭಯಮಿಶ್ರಿತ ಗೌರವ ಹೊಂದಿದ್ದು, ಪೂರ್ಣವಾಗಿ ಅವಳಿಗೆ ಅಧೀನನಾಗಿದ್ದ. ಮೊದಲನೆಯ ಮರಣದಂಡನೆಯ ಆಜ್ಞೆ ಅವನ ಸಹಿಗಾಗಿ ಬಂದಾಗ, ತನಗೇಕೆ ಬರೆಯಲು ಕಲಿಸಿದರೋ ಎಂದು ಆತ ಪರಿತಪಿಸಿದನಂತೆ. ಅವನು ಕೈಗೊಂಡ ಕಾರ್ಯಕ್ರಮಗಳೆಲ್ಲವೂ ಸದ್ಗುಣ ಮತ್ತು ವಿವೇಕ ಸೂಚಕವಾಗಿದ್ದುವು. ಅವನು ಸರ್ಕಸ್ಸುಗಳಲ್ಲಿ ರಕ್ತಪಾತದ ಸ್ಪರ್ಧೆಗಳನ್ನು ನಿಲ್ಲಿಸಿದ. ತೆರಿಗೆಗಳನ್ನು ಕಡಿಮೆ ಮಾಡಿದ. ಗುಲಾಮರಿಗೆ ತಮ್ಮ ಒಡೆಯರ ವಿರುದ್ಧ ದೂರುಗಳನ್ನು ತರಲು ಅನುಮತಿಯಿತ್ತ. ತನ್ನ ಬಗ್ಗೆ ಲೇಖಕರ ಚುಚ್ಚು ಮಾತುಗಳನ್ನು ಕ್ಷಮಿಸುತ್ತಿದ್ದ. ಗೂಢ ವಿಚಾರಣೆಗಳ ಸಂಖ್ಯೆ ತೀರಾ ಇಳಿಯಿತು. ರಾಜದ್ರೋಹದ ಕಾನೂನಿನ ತೀವ್ರತೆ ಕಡಿಮೆಯಾಯಿತು. ಮನೋರಂಜನೆಗಾಗಿ ಖಡ್ಗಮಲ್ಲರ ಹೋರಾಟಗಳನ್ನು ಏರ್ಪಡಿಸುವ ಬದಲು ಕಾವ್ಯ. ನಾಟಕ ಮತ್ತು ಆಟಗಳಲ್ಲಿ ಸ್ಪರ್ಧೆಗಳನ್ನು ಪ್ರಾರಂಭಿಸಿದ. 

	ಮಗ ತನ್ನ ಮಾತನ್ನು ಕೇಳುತ್ತಿಲ್ಲವೆಂಬುದು ಅಗ್ರಿಪ್ಟಿನಳಿಗೆ ತೋರಿತು. ಅವನನ್ನು ತನ್ನಂತೆ ಮಾಡಿಕೊಳ್ಳಲು ಯತ್ನಿಸಿದಳು. ಅದು ಸಾಧ್ಯವಾಗದಾಗ ಅವಳು ನಿವೃತ್ತಿ ಹೊಂದಿದಳು. ನೀರೋನ ಸಲಹೆಗಾರರು ಅವನ ಮನಸನ್ನು  ವಿಷಯ ಸುಖಗಳತ್ತ ತಿರುಗಿಸಿ ತಾವು ರಾಜ್ಯಸೂತ್ರಗಳನ್ನು ಹಿಡಿದುಕೊಂಡಿದ್ದರು. 59ರಲ್ಲಿ ಅವನು ಆತೋ ಎಂಬವನ ಪತ್ನಿ ಪಾಪಿಯ ಸಬೀನಳಲ್ಲಿ ಅನುರಕ್ತನಾದ. ಆಗ್ರಿಪ್ಟಿನ ಇದಕ್ಕೆ ಆಕ್ಷೇಪಣೆ ಎತ್ತಿದಾಗ ಅವಳನ್ನೇ ನೀರೋ ಕೊಂದ. ನೀರೋನ ತಿರಸ್ಕøತ ಪತ್ನಿ ಆಕ್ಟೇವಿಯಳು ಆಸ್ಥಾನದಲ್ಲೂ ಜನತೆಯಲ್ಲೂ ಅಸಮಾಧಾನ ಹಬ್ಬಿಸಲು ಯತ್ನಿಸಬಹುದೆಂಬ ಸಂಶಯದಿಂದ ಅವಳ ಮೇಲೆ 62ರಲ್ಲಿ ವ್ಯಭಿಚಾರದ ಸುಳ್ಳು ಆಪಾದನೆ ಹೊರಿಸಿ ವಿವಾಹವಿಚ್ಛೇದ ಮಾಡಿಕೊಂಡ. ಸ್ವಲ್ಪಕಾಲದಲ್ಲೇ ಅವಳು ಸತ್ತಳು. 62ರಲ್ಲಿ ಅವನು ಪಾಪಿಯಳನ್ನು ವಿವಾಹವಾದ. ಅವಳು 65ರಲ್ಲಿ ತೀರಿಕೊಂಡಳು. ಅನಂತರ ಅವನು ಸ್ಟಾಟಿಲಿಯ ಮೆಸಾಲಿನಳನ್ನು ಮದುವೆಯಾದ. 
	ತಾನೊಬ್ಬ ಉತ್ತಮ ಕಲಾವಿದನೆಂಬ ಒಣಹೆಮ್ಮೆ ಅವನನ್ನು ಆವರಿಸಿತ್ತು. ತಾನು ಉತ್ತಮ ಕವಿ, ರಥಿಕ, ಲೈರ್ ವಾದಕ ಎಂದು ಭ್ರಮಿಸತೊಡಗಿ, 59ರಲ್ಲಿ ಅಥವಾ 60ರ ಸುಮಾರಿಗೆ ಸಾರ್ವಜನಿಕ ಪ್ರದರ್ಶನಗಳನ್ನು ನೀಡಲು ಪ್ರಾರಂಭಿಸಿದ್ದ. ನಾಟಕಗಳಲ್ಲಿಯೂ ಪಾತ್ರ ವಹಿಸತೊಡಗಿದ್ದಲ್ಲದೇ ಸಾಮ್ರಾಜ್ಯವನ್ನು ತೊರೆದು ಕಾವ್ಯರಚನೆ ಸಂಗೀತಗಳಲ್ಲಿ ಮಗ್ನನಾಗಬೇಕೆಂಬ ಕನಸು ಕಾಣತೊಡಗಿದ.
64ರಲ್ಲಿ ರೋಮಿಗೆ ಬಿದ್ದ ಬೆಂಕಿ ಒಂಬತ್ತು ದಿನಗಳವರೆಗೆ ಉರಿದು ಅದರ ಹದಿನಾಲ್ಕು ವಿಭಾಗಗಳಲ್ಲಿ ಹತ್ತನ್ನು ಪೂರ್ಣವಾಗಿ ಇಲ್ಲವೇ ಭಾಗಶಃ ನಾಶಮಾಡಿತು. ನೀರೋನೇ ಈ ಬೆಂಕಿಗೆ ಕಾರಣನೆಂದು ಜನ ತಿಳಿದರು. ಆದರೆ ಬೆಂಕಿ ಹೊತ್ತಿದ ಕಾಲಕ್ಕೆ ಅವನು 56 ಕಿಮೀ. ದೂರದ ಆಂಟಿಯಮ್‍ನಲ್ಲಿದ್ದನೆಂದೂ ಆದ್ದರಿಂದ ಈ ಅಪಾದನೆ ಹುರುಳಿಲ್ಲದ್ದು ಎಂದೂ ಎನ್ನಲಾಗಿದೆ. ಆದರೂ ಅವನೇ ಬೆಂಕಿಗೆ ಕಾರಣನೆಂಬ ನಂಬಿಕೆ ಜನಗಳ ಮನಸ್ಸಿನಲ್ಲಿ ದೃಢವಾಗಿತ್ತು. ಆ ಅಪಾದನೆಯಿಂದ ತಪ್ಪಿಸಿಕೊಳ್ಳಲು ಅವನು ಕ್ರೈಸ್ತರ ಮೇಲೆ ಆ ಅಪವಾದವನ್ನು ಹೊರಿಸಿ ಅವರನ್ನು ಹಿಂಸೆಗೆ ಒಳಪಡಿಸಿದನೆಂದೂ ಕ್ರೈಸ್ತ ವಿರೋಧಿ ಕಾರ್ಯಾಚರಣೆಗಳನ್ನು ನಡೆಸಿದವರಲ್ಲಿ ಅವನು ಮೊದಲಿಗನಾದನೆಂದೂ ಹೇಳಲಾಗಿದೆ. ಈ ಆಪಾದನೆಯೂ ನಿರಾಧಾರವಾದ್ದು ಎನ್ನಲಾಗಿದೆ. ಏಕೆಂದರೆ ಆಗ ರೋಮಿನಲ್ಲಿ ಇದ್ದ ಕ್ರೈಸ್ತರ ಸಂಖ್ಯೆ ತೀರ ಕಡಿಮೆ. ಸೇಂಟ್ ಪಾಲ್ ಆಗ ತಾನೇ ಅಲ್ಲಿಗೆ ಬಂದಿದ. ಯೆಹೂದ್ಯರು ಅವನಿಂದ ಹೊಸ ಪಂಥದ ಬಗ್ಗೆ ಅರಿತುಕೊಳ್ಳಲು ಉತ್ಸುಕರಾಗಿದ್ದರು. ನೀರೋ ಈ ವಿಷಯದಲ್ಲಿ ನಿರ್ದೋಷಿಯೆಂದು ಸ್ಪಷ್ಟವಾಗುತ್ತದೆ. ಈ ಆಪಾದನೆಯನ್ನು ನೀರೋನ ಮೇಲೆ ಹೊರಿಸಿದವರು ಅನಂತರದ ಇತಿಹಾಸಕಾರರು. ನೀರೋ ರೋಮ್ ನಗರವನ್ನು ಪುನರ್ನಿರ್ಮಿಸಿದ. ರೋಮನ್ನು ತನ್ನ ಕಲಾಭಿರುಚಿಗೆ ಅನುಗುಣವಾಗಿ ನಿರ್ಮಿಸುವ ಉದ್ದೇಶದಿಂದಲೇ ಅವನು ಹಳೆಯ ನಗರಕ್ಕೆ ಬೆಂಕಿ ಇಕ್ಕಿದನೆಂದೂ ಹೇಳುವವರು ಹೇಳಿದರು.
	ಅವನ ಸರ್ಕಾರ ಪೂರ್ವದಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿತ್ತು. ರೋಮನ್ ಪ್ರಭುತ್ವವನ್ನು ಕಡೆಗಣಿಸಿದ್ದ ಆರ್ಮೀನಿಯದ ಮೇಲೆ ಸೇನಾಧಿಕಾರಿ ಗ್ನೇಯನ್ ಕಾರ್ಬುಲೋ ಫಲಪ್ರದವಾದ ಒಪ್ಪಂದ ಹೊರಿಸಿದ್ದ. ರೋಮ್ ಆರ್ಮೀನಿಯದ ದೊರೆ ಟೆರಿಟೇಟಿಸನನ್ನು ಮಾನ್ಯ ಮಾಡಿತಾದರೂ ಅವನು ನೀರೋನಿಂದ ಕಿರೀಟಧಾರಣ ಮಾಡಿಸಿಕೊಳ್ಳಲು ರೋಮಿಗೆ ಬರಬೇಕಾಯಿತು. ಇದರಿಂದ ರೋಮಿಗೆ ಅದರ ಪ್ರಬಲ ಶತ್ರುರಾಷ್ಟ್ರ ಪಾರ್ತಿಯದ ವಿರುದ್ಧ ಒಂದೇ ತಡೆರಾಜ್ಯ ಒದಗಿತು. ಆದರೆ ಆಸ್ಥಾನದ ದುಂದುವೆಚ್ಚಕ್ಕಾಗಿ ಸುಲಿಗೆಗೆ ಒಳಗಾಗಿದ್ದ ಪ್ರಾಂತ್ಯಗಳು ಅಸಮಾಧಾನ ತಾಳಿದ್ದವು. ರಾಣಿ ಬೋಡೀಸಿಯಳ ನೇತೃತ್ವದಲ್ಲಿ ಬ್ರಿಟನ್ನಿನಲ್ಲಿ 60-61ರಲ್ಲಿ ಬಂಡಾಯವೆದ್ದಿತು. 66ರಲ್ಲಿ ಜೂಡಿಯದಲ್ಲಿ ಎದ್ದ ದಂಗೆ 70ರವರೆಗೂ ಮುಂದುವರೆಯಿತು. ನೀರೋಗೆ ಅನೇಕ ವಿರೋಧಿಗಳಾದರು. 65ರಲ್ಲಿ ಅವನ ವಿರುದ್ಧವಾಗಿ ಒಂದು ಒಳಸಂಚು ನಡೆಯಿತು. ಅದರಲ್ಲಿ ಸೆನೇಟಿನ ಸದಸ್ಯರು, ಸರದಾರರು, ಅಧಿಕಾರಿಗಳು, ತತ್ತ್ವಜ್ಞಾನಿಗಳು ಮುಂತಾಗಿ ಅನೇಕ ವರ್ಗಗಳ ಜನರು ಸೇರಿದ್ದರು. ತಮ್ಮ ಒಡೆಯರು ನಡೆಸುತ್ತಿದ್ದ ಒಳಸಂಚಿನ ಬಗ್ಗೆ ಗುಲಮರು ಮುನ್ಸೂಚನೆ ಇತ್ತಿದ್ದರಿಂದ ಅದು ಯಶಸ್ವಿಯಾಗಲಿಲ್ಲ. 41 ಸಂಚುಗಾರರ ಪೈಕಿ ದಂಡನೆ ಇಲ್ಲವೇ ಅದರ ಭಯದಿಂದ 18 ಜನರು ಸತ್ತರು. ಉಳಿದವರು ದೇಶಭ್ರಷ್ಟರಾದರು; ಇಲ್ಲವೇ ಕ್ಷಮಾದಾನ ಪಡೆದು ಬಿಡುಗಡೆ ಹೊಂದಿದರು. ಬಿಡುಗಡೆಯಾದವರಲ್ಲೊಬ್ಬನಿಗೆ ನಿರೋ ದಂಡಾಧಿಕಾರವನ್ನು ವಹಿಸಿ ಗ್ರೀಸಿನ 15 ತಿಂಗಳ ದೀರ್ಘ ಪ್ರವಾಸ ಕೈಗೊಂಡ. ಅಲ್ಲಿ ಬರಿಗಾಲಿನಲ್ಲಿ ಸಾಧುವಿನ ಉಡುಪು ಧರಿಸಿ ಅಲೆದಾಡಿದ. ಗತವೈಭವದ ಗೌರವಾರ್ಥ ಗ್ರೀಕ್ ಪಟ್ಟಣಗಳಿಗೆ ಸ್ವಾತಂತ್ರ್ಯ ನೀಡಿದ. ರೋಮಿಗೆ ಹಿಂದಿರುಗಿದ ಮೇಲೆ ಅಪಾಲೋ ಪೂಜೆಯನ್ನು ಪ್ರಾರಂಭಿಸಿದ. ಗುಲಾಮರನ್ನು ಬಿಡುಗಡೆ ಮಾಡಿದ ಜನರಲ್ಲಿ ಧನವನ್ನು ಹಂಚಲು ಕುಲೀನರಿಗೆ ಬೋಧಿಸಿದ.
	ಅವನ ಕೃತ್ಯಗಳಿಂದ ಆಗದವರ ಸಂಖ್ಯೆ ಹೆಚ್ಚಿತು. ಸೆನೇಟಿನ ಸದಸ್ಯರು, ಅವನಿಂದ ಅವಮಾನಿತರಾದ ಕುಲೀನರು, ಉಚ್ಚಾಟನೆ ಹೊಂದಿದ ಶ್ರೀಮಂತರು ವೈರಿಗಳಾದರು.
	ಸ್ಪೇನ್, ಗಾಲ್ ಮತ್ತು ಪೂರ್ವದ ಎಲ್ಲೆ ಪ್ರದೇಶಗಳೂ ಸೇರಿದಂತೆ ಸಾಮ್ರಾಜ್ಯದ ಎಲ್ಲ ಕಡೆಗಳಲ್ಲೂ ದಂಗೆಗಳೆದ್ದವು. ನೀರೋ ಯೋಗ್ಯಕ್ರಮಗಳನ್ನು ತೆಗೆದುಕೊಳ್ಳುವುದರ ಬದಲಾಗಿ ಸ್ತೋತ್ರ ಗೀತೆಗಳನ್ನು ರಚಿಸತೊಡಗಿದ. ಸೈನಿಕರು ಸ್ಪೇನಿನ ಗಾಲ್ಬನನ್ನು ಚಕ್ರವರ್ತಿಯೆಂದು ಸಾರಿದರು. ಸೆನೇಟು ನೀರೋನನ್ನು ಗುಲಾಮನಂತೆ ಸಿಲುಬೆಗೆ ಏರಿಸಿ ಕೊಲ್ಲಬೇಕೆಂದು ಶಿಕ್ಷೆ ವಿಧಿಸಿತು. ಅವನು ರೋಮನ್ನು ಬಿಟ್ಟು ಪಲಾಯನ ಮಾಡಿದ.
	ನೀರೋನ ಸಾವಿನ ಬಗ್ಗೆ ಎರಡು ಹೇಳಿಕೆಗಳಿವೆ. ಅವನು 68ರ ಜೂನ್ 9ರಂದು ರೋಮಿನ ಹತ್ತಿರ ಕಠಾರಿಯಿಂದ ಕತ್ತನ್ನು ಇರಿದುಕೊಂಡು ಸತ್ತನೆಂಬುದು ಒಂದು ಹೇಳಿಕೆ. ಅವನು ಗ್ರೀಕ್ ದ್ವೀಪಗಳಿಗೆ ಹೋದನೆಂದೂ ಸಿತ್ನಾಸ್ ದ್ವೀಪದ ರಾಜ್ಯಪಾಲ ಅವನನ್ನು ಗುರುತಿಸಿ ಸೆನೇಟ್ ವಿಧಿಸಿದ್ದಂತೆ ಸಿಲುಬೆಗೆ ಏರಿಸಿದನೆಂದೂ ಇನ್ನೊಂದು ಹೇಳಿಕೆ.				(ಜಿ.ಕೆ.ಯು.)